ನಿಜಗುಣಾರ್ಯ
	ಸು. 1650. ವೀರಶೈವ ಕವಿ ಎಂದು ತೋರುತ್ತದೆ. ಈತ ತನ್ನ ಕೃತಿಯಲ್ಲಿ `ನಿಜಗುಣಾರ್ಯ ವಚನದಮೃತ ಎಂದು ಹೇಳಿಕೊಂಡಿರುವುದರಿಂದ ಕವಿಯ ಹೆಸರು ನಿಜಗುಣಾರ್ಯನೇ ಇರಬೇಕು. ನಿಜಗುಣ ಶಿವಯೋಗಿಯೇ ಈ ಹೆಸರಿನಿಂದ ಈ ಕೃತಿಯನ್ನು ರಚಿಸಿರಬಹುದೆ ಎಂಬ ಸಂಶಯಕ್ಕೆ ಎಡೆಯಿದೆ. ಆದರೆ ನಿಜಗುಣ ಶಿವಯೋಗಿಯ ಕೃತಿಗಳಲ್ಲಿ ಕಂಡುಬರುವ ಶಂಭುಲಿಂಗನ ಅಂಕಿತ ಈತನ ಕೃತಿಯಲ್ಲಿಲ್ಲವಾದುದರಿಂದ ಇಬ್ಬರೂ ಭಿನ್ನರೆಂಬ ಊಹೆಯೇ ಸರಿಯೆನಿಸುತ್ತದೆ.

	ಈತನ ಕೃತಿ ಅದ್ವೈತರಾಮಾಯಣ, ವಚನಗಳಲ್ಲಿದೆ. ದೊರೆತಿರುವ ಅಸಮಗ್ರ ಕೃತಿಯಲ್ಲಿ 24 ಸಂಧಿಗಳು 933 ವಚನಗಳಿರುವುದಾಗಿ ಕವಿಚರಿತೆಕಾರರು ಹೇಳಿದ್ದಾರೆ. `ಅದ್ವೈತದಲ್ಲಿ ರಾಮರಾವಣರ ನಿಜಪಥವನು ಪಾದವೈಭವವನು ಮಂಡೋದರಿಯ ರಾವಣನ ವಾದವನು ಉಸಿರುವೆನು ಎಂದು ಕವಿ ಹೇಳಿಕೊಂಡಿರುವುದರಿಂದ ಅದ್ವೈತ ತತ್ತ್ವ ಈ ಕೃತಿಯಲ್ಲಿ ಅಡಕವಾಗಿರುವಂತೆ ತೋರುತ್ತದೆ. ಈ ಕೃತಿಗೆ ಆಧಾರ ಯಾವುದೆಂದು ತಿಳಿಯದು. ಕೆಲವೆಡೆ `ಎಂದನಾಮುನಿಪ, `ಕೇಳೈ ಶಾಂತಾರಾಮನೆ ಎಂದಿರುವುದರಿಂದ ಶಾಂತಾರಾಮನೆಂಬಾತನಿಗೆ ಮುನೀಶ್ವರನೊಬ್ಬ ರಾಮಾಯಣವನ್ನು ಕಥಿಸಿರಬಹುದು. ಕವಿಚರಿತೆಕಾರರು ಉದ್ಧರಿಸಿದ ಒಂದು ವಚನ ಹೀಗಿದೆ:

	`ದಶಶಿರೋತ್ತಮನು ದಶರಥೋತ್ತಮನು ಎರಡು ಕಲೆತುದೆ ರಾಮಗುಣ, ಭಕ್ತಿ ಭಾವವು ಎರಡು ಕಲೆತುದೆ ಲಕ್ಷ್ಮಣಗುಣ. ಕಮಲ ಸೂರ್ಯನ ಕಲೆತುದೆ ಸೀತಾಗುಣ. ಮನಧನವ ಕಲೆತುದೆ ಭರತಗುಣ. ಜೀವ ಭೂವಿಜಯ ಕಲೆತುದು ಶತ್ರುಘ್ನ ಗುಣ. ಐದು ಗುಣ ಕಲೆತುದೇ ದೇಹಗುಣವೆಂದಾ.

	ವಚನಕಾರರ ಬೆಡಗಿನ ವಚನಗಳಂತೆ ಈ ವಚನಗಳಲ್ಲೂ ಗೂಢಾರ್ಥ ತುಂಬಿರುವಂತೆ ತೋರುತ್ತದೆ. ಕೃತಿ ಅನುಪಲಬ್ಧವಾದುದರಿಂದ ಹೆಚ್ಚಿನ ವಿಮರ್ಶೆಗೆ ಎಡೆಯಿಲ್ಲವಾಗಿದೆ.
(ಎಂ.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ